ಉಡುಪಿ : ಸುವರ್ಣ ಪರ್ವವನ್ನಾಚರಿಸುತ್ತಿರುವ ನಿಟ್ಟೂರು ಪ್ರೌಢ ಶಾಲೆ ಸೆಪ್ಟಂಬರ್ 13 ರಂದು 15 ಮಂದಿ ಶಾಲಾ ಹಳೆವಿದ್ಯಾರ್ಥಿ ಶಿಕ್ಷಕರುಗಳನ್ನು ‘ಸುವರ್ಣ ಶಿಕ್ಷಕ ಪುರಸ್ಕಾರ’ದೊಂದಿಗೆ ಸಮ್ಮಾನಿಸಿತು. ಈ ಸಂದರ್ಭದಲ್ಲಿ ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪೆÇ್ರ.ಎಂ.ಎಲ್ ಸಾಮಗ ಮಾತನಾಡಿ ಬಾಲ್ಯದಲ್ಲಿ ಕಳೆದ ಶಾಲಾ ದಿನಗಳನ್ನು ಮೆಲುಕುಹಾಕುವಾಗ ದೊರೆಯುವ ಆನಂದಕ್ಕೆ ಸರಿಸಮನಾದುದು ಬೇರೆ ಇಲ್ಲ. ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದ ಹಳೆವಿದ್ಯಾರ್ಥಿಗಳನ್ನು ಕಲಿತ ಶಾಲೆಯಲ್ಲಿ ಸಮ್ಮಾನಿಸುವುದು ವಿಶಿಷ್ಟವಾದ ಅನುಭವ ನೀಡುವ ಸಂದರ್ಭವೆಂದು ನುಡಿದು, ಶಾಲಾ ಶೈಕ್ಷಣಿಕ ಹಾಗೂ ಕೃಷಿ ಚಟುವಟಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಸಮ್ಮಾನಿತ ಹಳೆವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು. ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಇವರು ಎಲ್ಲ ಶಿಕ್ಷಕರನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಲೆಕ್ಕಪರಿಶೋಧಕ ಸಂಘ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರದೀಪ್ ಜೋಗಿಯನ್ನು ಅಭಿನಂದಿಸಲಾಯಿತು. ಈ ತನಕ 124 ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡ ‘ಕೊರೋನ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಹಳೆವಿದ್ಯಾರ್ಥಿ ನಾಗಾರ್ಜುನ ಪೂಜಾರಿಯನ್ನು ಹತ್ತುಸಾವಿರ ನಿಧಿಯೊಂದಿಗೆ ಸಮ್ಮಾನಿಸಲಾಯಿತು. ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನಿಯಾದ ಗ್ರೀಷ್ಮಾಳನ್ನು ಐದು ಸಾವಿರ ನಗದಿನೊಂದಿಗೆ ಸಮ್ಮಾನಿಸಲಾಯಿತು. ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಪಿ.ವೇಣುಗೋಪಾಲ ಆಚಾರ್, ಎಸ್.ವಿ ಭಟ್, ಕೆ.ಸುಬ್ರಹ್ಮಣ್ಯ ಭಟ್ ಹಾಗೂ ಭಾಸ್ಕರ ಡಿ. ಸುವರ್ಣ, ಶಾಲಾ ಅಭಿಮಾನಿ ವಿಜಯ್ ಕುಮಾರ್ ಮುದ್ರಾಡಿ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ದಿನೇಶ್ ಪಿ. ಪೂಜಾರಿ ಉಪಸ್ಥಿತರಿದ್ದರು. ಆರಂಭದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ ಸ್ವಾಗತಿಸಿದರು. ಎಚ್.ಎನ್ ಶೃಂಗೇಶ್ವರ ಶಿಕ್ಷಕರ ಪರಿಚಯ ಮಾಡಿದರು. ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು. ಹಳೆವಿದ್ಯಾರ್ಥಿ ಶಶಿಪ್ರಭಾ ಕಾರಂತ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಗೆ ಹಿರಿಯ ಶಿಕ್ಷಕಿ ಶ್ರೀಮತಿ ಅನಸೂಯ ಧನ್ಯವಾದಗೈದರು.